HomeUncategorizedNewsಕಂಕನವಾಡಿಯಲ್ಲಿ ರೈತರ ಆಕ್ರೋಶ: ಜೈಲ್ ಭರೋ ಚಳವಳಿ ತಡೆದ ಪೊಲೀಸರ ಕ್ರಮಕ್ಕೆ ಖಂಡನೆ!

ಕಂಕನವಾಡಿಯಲ್ಲಿ ರೈತರ ಆಕ್ರೋಶ: ಜೈಲ್ ಭರೋ ಚಳವಳಿ ತಡೆದ ಪೊಲೀಸರ ಕ್ರಮಕ್ಕೆ ಖಂಡನೆ!

ಕಂಕನವಾಡಿಯಲ್ಲಿ ರೈತರ ಆಕ್ರೋಶ: ಜೈಲ್ ಭರೋ ಚಳವಳಿ ತಡೆದ ಪೊಲೀಸರ ಕ್ರಮಕ್ಕೆ ಖಂಡನೆ! ₹5,500 ಕಬ್ಬಿನ ದರಕ್ಕೆ ಆಗ್ರಹಿಸಿ ನಿಪ್ಪಾಣಿ–ಮುಧೋಳ ರಸ್ತೆ ತಡೆದು ರೈತರ ಪ್ರತಿಭಟನೆ

ಕಂಕನವಾಡಿ: ಕಬ್ಬಿಗೆ ನ್ಯಾಯಯುತ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ಪ್ರತಿ ಟನ್ ಕಬ್ಬಿಗೆ ₹5,500 ದರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ಬೃಹತ್ ‘ಜೈಲ್ ಭರೋ’ ಚಳವಳಿಯನ್ನು ಪೊಲೀಸರು ತಡೆದಿರುವುದನ್ನು ಖಂಡಿಸಿ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕನವಾಡಿ ಪಟ್ಟಣದಲ್ಲಿ ರೈತರು ನಿಪ್ಪಾಣಿ–ಮುಧೋಳ ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದರು.

ಕಬ್ಬಿನ ದರವನ್ನು ಪ್ರತಿ ಟನ್‌ಗೆ ₹5,500ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿ ರೈತರು ಬೆಳಗಾವಿಯ ಹಿಂಡಲಗಾ ಜೈಲಿನತ್ತ ಪಾದಯಾತ್ರೆ ನಡೆಸಲು ಸಜ್ಜಾಗಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಮುಕ್ತಿಮಠದ ಬಳಿ ನೂರಾರು ರೈತರು ಸಮಾವೇಶಗೊಂಡಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ರೈತರು ಬೆಳಗಾವಿ ನಗರ ಪ್ರವೇಶಿಸದಂತೆ ತಡೆದಿದ್ದಾರೆ.

ಇದಲ್ಲದೆ, ಹೋರಾಟದ ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಸೇರಿದಂತೆ ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

 ಪೊಲೀಸರ ಕ್ರಮಕ್ಕೆ ರೈತರ ತೀವ್ರ ವಿರೋಧ

ಪೊಲೀಸರ ಕ್ರಮವನ್ನು ಖಂಡಿಸಿ ರಾಯಬಾಗ ತಾಲೂಕಿನ ಕಂಕನವಾಡಿ ಪಟ್ಟಣದ ಚೈತನ್ಯ ಆಶ್ರಮದ ಬಳಿ ರೈತರು ನಿಪ್ಪಾಣಿ–ಮುಧೋಳ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು. ರೈತರಿಂದ ರಸ್ತೆ ತಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ ರೈತರು, “ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಬದಲು ಪೊಲೀಸರ ಮೂಲಕ ನಮ್ಮ ಹೋರಾಟದ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

 ₹5,500 ಕಬ್ಬಿನ ದರ ನಿಗದಿಗೆ ಪಟ್ಟು

ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿಪಡಿಸಬೇಕು ಎಂದು ರೈತರು ಒತ್ತಾಯಿಸಿದರು. ರೈತರನ್ನು ವಶಕ್ಕೆ ಪಡೆದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.

ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ರೈತರ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಗಳಿದ್ದು, ರೈತರ ಬೇಡಿಕೆಗಳಿಗೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ಸಿದ್ದು ಅರಭಾವಿ ಕ್ರಾಂತಿ ಕರ್ನಾಟಕ ನ್ಯೂಸ್ ಬೆಳಗಾವಿ

 

RELATED ARTICLES
- Advertisment -spot_img

Most Popular

Recent Comments