ಬೆಳಗಾವಿಯ ಈ ಗ್ರಾಮದಲ್ಲಿ ದೇಶಭಕ್ತಿಯ ಕಿಚ್ಚು! ಬ್ರಿಗೇಡಿಯರ್, ಕರ್ನಲ್ ಸೇರಿ ಒಂದೇ ಊರಲ್ಲಿ 250ಕ್ಕೂ ಹೆಚ್ಚು ಸೈನಿಕರು
ಬೆಳಗಾವಿ: ಇಂಚಲ ಗ್ರಾಮದ ಓರ್ವ ಬ್ರಿಗೇಡಿಯರ್, ಒಬ್ಬ ಕರ್ನಲ್ ಸೇರಿ (250) ಕ್ಕೂ ಅಧಿಕ ಯೋಧರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅಲ್ಲದೇ ಅತೀ ಹೆಚ್ಚು ಶಿಕ್ಷಕರನ್ನು ಹೊಂದಿರುವ ಹೆಗ್ಗಳಿಕೆಯೂ ಸವದತ್ತಿ ತಾಲೂಕಿನ ಸುಕ್ಷೇತ್ರ ಇಂಚಲ ಗ್ರಾಮಕ್ಕೆ ಸಲ್ಲುತ್ತದೆ. ಇಲ್ಲಿನ ಸ್ವಾಮೀಜಿಯ ಕೃಪೆ, ಮಾಜಿ ಸೈನಿಕರ ಪ್ರೇರಣೆಯಿಂದ ಸೇನೆ ಸೇರುವವರ ಸಂಖ್ಯೆ ಹೆಚ್ಚುತ್ತಿದೆ.
ಸವದತ್ತಿ ತಾಲೂಕಿನ ಸುಕ್ಷೇತ್ರ ಇಂಚಲ ಗ್ರಾಮವು ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದಿಂದಲೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಡಾ.ಶಿವಾನಂದ ಭಾರತಿ ಸ್ವಾಮೀಜಿಯ ದೂರದೃಷ್ಟಿಯ ಫಲವಾಗಿ ಇಂಚಲ ಗ್ರಾಮದಲ್ಲಿ ಶಿಕ್ಷಣ ಕ್ರಾಂತಿಯಾಗಿದೆ.
ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಪದವಿ, ಡಿಇಎಡ್, ಬಿಎಎಂಎಸ್ ಕಾಲೇಜುಗಳನ್ನು ತೆರೆಯುವ ಮೂಲಕ ಈ ಭಾಗದಲ್ಲಿ ದೊಡ್ಡ ಬದಲಾವಣೆಗೆ ಸ್ವಾಮೀಜಿ ನಾಂದಿ ಹಾಡಿದ್ದರು. ಇದರ ಪರಿಣಾಮ ಪ್ರತಿಯೊಬ್ಬರೂ ಇಂದು ಸುಶಿಕ್ಷಿತರಾಗಿದ್ದಾರೆ. ಅಲ್ಲದೇ ಸುತ್ತಲಿನ ಗ್ರಾಮದ ಜನ “ಇಂಚಲ ಮುತ್ತಿನ ಗೊಂಚಲ” ಎಂದು ಹೊಗಳುವಂತೆ ಪ್ರಗತಿ ಕಂಡಿದೆ.
*ಇಂಚಲ ಗ್ರಾಮದ ಪ್ರತಿ ಮನೆಯಲ್ಲೂ ಶಿಕ್ಷಕರು: ಇಂಚಲದ ಬಹುತೇಕವಾಗಿ ಪ್ರತಿ ಮನೆ ಮನೆಯಲ್ಲೂ ಶಿಕ್ಷಕರಿದ್ದಾರೆ. ರಾಜ್ಯದ ವಿವಿಧೆಡೆ ಅವರು ವಿದ್ಯಾರ್ಥಿಗಳಿಗೆ ಅಕ್ಷರದಾಸೋಹ ಉಣಬಡಿಸುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲೆ ಅತೀ ಹೆಚ್ಚು ಶಿಕ್ಷಕರನ್ನು ಹೊಂದಿರುವ ಪಟ್ಟಿಯಲ್ಲಿ ಇಂಚಲ ಸ್ಥಾನ ಪಡೆದಿದೆ.
ಶಿಕ್ಷಕರ ಜೊತೆಗೆ ಅತೀ ಹೆಚ್ಚು ಸೈನಿಕರನ್ನು ದೇಶಸೇವೆಗೆ ಕಳಿಸಿದ ಹಿರಿಮೆಗೂ ಇಂಚಲ ಪಾತ್ರವಾಗಿದೆ. ಒಂದೆಡೆ ಈ ಊರಿನ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುತ್ತಿದ್ದರೆ, ಮತ್ತೊಂದೆಡೆ ಯೋಧರು ಗಡಿಯಲ್ಲಿ ದೇಶ ರಕ್ಷಣೆಗೆ ಪಣ ತೊಟ್ಟಿರುವುದು ಸವದತ್ತಿ ತಾಲೂಕಿನ ಸುಕ್ಷೇತ್ರ ಇಂಚಲ ಗ್ರಾಮದ ವಿಶೇಷವಾಗಿದೆ.
ಇಂಚಲ ಗ್ರಾಮದಲ್ಲಿ 250ಕ್ಕೂ ಅಧಿಕ ಯೋಧರಿಂದ ಸೇವೆ 90ಕ್ಕೂ ಅಧಿಕ ಯೋಧರ ನಿವೃತ್ತಿ: ಸದ್ಯ ವಾಯುಪಡೆ, ಭೂಸೇನೆ, ನೌಕಾಪಡೆ, ಸಿಆರ್‌ಪಿಎಫ್, ಬಿಎಸ್‍ಎಫ್, ಸಿಐಎಸ್‍ಎಫ್, ಎಸ್‍ಎಸ್‍ಬಿಯಲ್ಲಿ ಇಂಚಲದ ಹೆಮ್ಮೆಯ ಯೋಧರು ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮಸ್ಥರು ಹೇಳುವ ಪ್ರಕಾರ, ಸದ್ಯ 250ಕ್ಕೂ ಅಧಿಕ ಯೋಧರು ಸೇನೆಯಲ್ಲಿದ್ದರೆ, 90ಕ್ಕೂ ಹೆಚ್ಚು ಯೋಧರು ನಿವೃತ್ತಿಯಾಗಿದ್ದಾರೆ.
ಗ್ರಾಮದ ಕೆಲವರು ಸೇನೆಯಲ್ಲಿ ಉನ್ನತ ಹುದ್ದೆಯನ್ನೂ ಏರಿದ್ದಾರೆ. ಇಂಚಲದ ಹೆಮ್ಮೆಯ ಪುತ್ರ ಯಲ್ಲನಗೌಡ ಮಲ್ಲೂರ ಬ್ರಿಗೇಡಿಯರ್ ಆಗಿದ್ದರೆ, ಸಿದ್ಧರಾಮ ಜಂಬಗಿ ಲೆಫ್ಟಿನೆಂಟ್ ಕರ್ನಲ್ ಆಗಿರುವುದು ಗ್ರಾಮಸ್ಥರ ಅಭಿಮಾನವನ್ನು ಇಮ್ಮಡಿಗೊಳಿಸಿದೆ. ಇನ್ನೂ ಹಲವರು ಸೇನೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಗ್ರಾಮದ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
ಇಂಚಲ್ಲಿ ಗ್ರಾಮದಲ್ಲಿ ತರಬೇತಿ: 2006ರಲ್ಲಿ ಶ್ರೀ ಶಿವಯೋಗೀಶ್ವರ ಮಾಜಿ ಸೈನಿಕರ ಸಂಘ ಸ್ಥಾಪಿಸಲಾಗಿದೆ. ಇಲ್ಲಿ ಸೇನೆಗೆ ಯಾಕೆ ಸೇರಬೇಕು? ಸೇನೆ ಸೇರಲು ಯಾವ ರೀತಿ ತಯಾರಿ ನಡೆಸಬೇಕು? ಅಲ್ಲಿ ಹೇಗೆಲ್ಲಾ ಕೆಲಸ ಮಾಡಬೇಕು? ಏನೆಲ್ಲಾ ಸೌಲಭ್ಯಗಳು ದೊರೆಯುತ್ತವೆ ಎಂಬುದನ್ನು ಗ್ರಾಮದ ಯುವಕರಿಗೆ ತಿಳಿಸುತ್ತಿರುವ ಮಾಜಿ ಸೈನಿಕರು, ಅವರಲ್ಲಿ ದೇಶಾಭಿಮಾನ ಮೂಡಿಸುತ್ತಿದ್ದಾರೆ. ಇದರ ಪರಿಣಾಮ ಪ್ರತಿವರ್ಷ ಕನಿಷ್ಠ 10 ಯುವಕರು ಸೇನೆಗೆ ಭರ್ತಿ ಆಗುತ್ತಿದ್ದಾರೆ.
ಡಾ.ಶಿವಾನಂದ ಭಾರತಿ ಸ್ವಾಮೀಜಿ ಪುಣ್ಯ: “ಡಾ.ಶಿವಾನಂದ ಭಾರತಿ ಸ್ವಾಮೀಜಿ ಕೃಪೆಯಿಂದ ಇಂಚಲದ ಚಿತ್ರಣವೇ ಬದಲಾಗಿದೆ. ನಮ್ಮೂರು ಅತೀ ಹೆಚ್ಚು ಶಿಕ್ಷಕರನ್ನು ಹೊಂದಿದೆ. ಜೊತೆಗೆ ಸೈನಿಕರ ಸಂಖ್ಯೆಯೂ ಅಧಿಕವಾಗಿದೆ. ನಾನು 27 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಆಗಿದ್ದೇನೆ. ಈಗ ನಮ್ಮೂರಿನ ಯುವಕರಿಗೆ ಸೇನೆ ಸೇರಲು ಮಾರ್ಗದರ್ಶನ ಮಾಡುತ್ತಿದ್ದೇನೆ. ಸದ್ಯ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ ನಮಗೆ ಆಹ್ವಾನಿಸಿದರೆ ನಾವು ಹೋಗಲು ಸಿದ್ಧರಿದ್ದೇವೆ. ಸಮವಸ್ತ್ರ ಧರಿಸಿದ ಮೇಲೆ ನಮ್ಮೊಳಗೆ ದೊಡ್ಡ ಶಕ್ತಿ ಬರುತ್ತದೆ. ಯುದ್ಧ ನಡೆಯುವಾಗ ಹಿಂದೆ ಸರಿಯುವ ಮಾತೇ ಇಲ್ಲ. ಶತ್ರುಗಳ ಹಣೆಗೆ ಗುಂಡು ಹಾರಿಸಿ ಮುನ್ನುಗುವುದಷ್ಟೇ” ಎನ್ನುತ್ತಾರೆ ಮಾಜಿ ಸೈನಿಕ ರುದ್ರಪ್ಪ ಬಾಗೇವಾಡಿ.
ಒಂದೇ ಮನೆಯಲ್ಲಿ 15 ಸೈನಿಕರು: ಮಾಜಿ ಯೋಧ ಸಂಗನಾಯ್ಕ ಬಾಗನವರ ಮಾತನಾಡಿ, “24 ವರ್ಷ ಸೇವೆ ಸಲ್ಲಿಸಿ, ಈಗ ಎರಡು ವರ್ಷಗಳ ಹಿಂದೆ ನಿವೃತ್ತಿ ಆಗಿದ್ದೇನೆ. ನಮ್ಮೂರಿನ ಓರ್ವ ಬ್ರಿಗೇಡಿಯರ್, ಒಬ್ಬರು ಕರ್ನಲ್ ಇದ್ದಾರೆ. ಇನ್ನು ಬಹಳಷ್ಟು ಸಂಖ್ಯೆಯಲ್ಲಿ ಸೈನಿಕರು ಸೇನೆಯಲ್ಲಿದ್ದಾರೆ. ಇದಕ್ಕೆಲ್ಲಾ ಶಿವಾನಂದ ಭಾರತಿ ಸ್ವಾಮೀಜಿ ಮತ್ತು ಮಾಜಿ ಸೈನಿಕರ ಪ್ರೋತ್ಸಾಹವೇ ಪ್ರಮುಖ ಕಾರಣ.
ಬಾಗೇವಾಡಿ ಮನೆತನದಲ್ಲಿ ಮಾಜಿ ಹಾಲಿ ಸೇರಿ 15 ಸೈನಿಕರಿದ್ದಾರೆ. ಮಲ್ಲೂರ 9, ದಿನ್ನಿಮನಿ 5, ಬಾಗನವರ 5, ಪಟ್ಟಣಶೆಟ್ಟಿ 5, ಗಾಣಿಗೇರ 5 ಸೇರಿ ಗ್ರಾಮದ ಹಲವಾರು ಮನೆತನಗಳ ಸದಸ್ಯರು ಸೇನೆಯಲ್ಲಿದ್ದಾರೆ. ಸದ್ಯಕ್ಕೆ ಗಡಿಯಲ್ಲಿ ಸಹಜ ಸ್ಥಿತಿಯಿದೆ. ಒಂದು ವೇಳೆ ಯುದ್ಧದ ಪರಿಸ್ಥಿತಿ ಸೃಷ್ಟಿಯಾದರೆ ತಾವು ಸಿದ್ಧರಾಗುವಂತೆ ಮೇಲಾಧಿಕಾರಿಗಳು ನಮಗೆ ತಿಳಿಸಿದ್ದಾರೆ. ಕರೆ ಬಂದರೆ ಗಂಟು-ಮೂಟೆ ಕಟ್ಟಿಕೊಂಡು ಗಡಿಗೆ ಹೋಗಲು ನಾವು ಸಿದ್ಧರಿದ್ದೇವೆ” ಎಂದರು.
ಬ್ರಿಗೇಡಿಯರ್ ತಂದೆ ಹೇಳಿದ್ದೇನು: ಬ್ರಿಗೇಡಿಯರ್ ಯಲ್ಲನಗೌಡ ಮಲ್ಲೂರ ತಂದೆ ದೊಡ್ಡನಾಯ್ಕ ಮಲ್ಲೂರ ಅವರು ಮಾತನಾಡಿ, “ನನ್ನ ಮಗ ತನ್ನ ಇಡೀ ಜೀವನವನ್ನೇ ಸೇನೆಗೆ ಮುಡಿಪಿಟ್ಟಿದ್ದಾನೆ. ಕಾರ್ಗಿಲ್ ಯುದ್ಧದಲ್ಲಿ ಗುಂಡು ತಗುಲಿತ್ತು. ಆದರೂ ಶತ್ರುಗಳ ಜೊತೆಗಿನ ಕಾದಾಟದಿಂದ ಹಿಂದೆ ಸರಿಯಲಿಲ್ಲ. ಆಗ ಊರಿಗೆ ವಾಪಸ್ ಬರುವಂತೆ ಮಗನಿಗೆ ಹೇಳಿದೆವು. ಅದಕ್ಕೆ ಆತ ಒಪ್ಪಲಿಲ್ಲ. “ದೇಶ ಸೇವೆಯೇ ಈಶ ಸೇವೆ” ಎಂದುಕೊಂಡು ಸೇನೆಯಲ್ಲೇ ಮುಂದುವರಿದಿದ್ದಾನೆ.
ನನ್ನ ಸುಪುತ್ರ ದೇಶ, ರಾಜ್ಯಕ್ಕೆ ಕೀರ್ತಿ ತರಲಿ ಅಂತಾ ನಾನು ಆಶಿಸುತ್ತೇನೆ. ಅದೇ ರೀತಿ ನಮ್ಮೂರಿನ ಸಿದ್ಧರಾಮ ಜಂಬಗಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾನೆ. ನಮ್ಮೂರಿನ ಇನ್ನೂ ಅನೇಕ ಯುವಕರು ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಲಿ” ಎಂದು ಹಾರೈಸಿದರು.
Recent Comments