ಬೆಳಗಾವಿ, ಸೆ.15: ಗಣೇಶ ಚತುರ್ಥಿಯ ಸಂಭ್ರಮದಲ್ಲಿದ್ದ ಬೆಳಗಾವಿ ನಗರದಲ್ಲಿ ಹೃದಯವಿದ್ರಾವಕ ಅಗ್ನಿ ದುರಂತವೊಂದು ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗಾವಿಯ ಚಾವ್ಹಾಣ್ ಗಲ್ಲಿಯಲ್ಲಿ ತಡರಾತ್ರಿ ಈ ಭೀಕರ ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯಂತೆ ಮನೆಯ ಅಡುಗೆಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಇಡೀ ಶೆಡ್ ಮಾದರಿಯ ಮನೆಗೆ ಬೆಂಕಿ ವ್ಯಾಪಿಸಿದೆ ಎನ್ನಲಾಗಿದೆ.
ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಮನೆಯಲ್ಲಿದ್ದ ಫ್ರಿಡ್ಜ್ ಕೂಡ ಬ್ಲಾಸ್ಟ್ ಆಗಿರುವ ಶಂಕೆ ವ್ಯಕ್ತವಾಗಿದ್ದು, ಇದರಿಂದ ಬೆಂಕಿ ಮತ್ತಷ್ಟು ತೀವ್ರವಾಗಿ ಹರಡಿರಬಹುದು ಎನ್ನಲಾಗಿದೆ.
ನಾಲ್ಕು ಜೀವಗಳು ದುರಂತ ಅಂತ್ಯ ಮೃತರನ್ನು ಗಜಾನನ ರಾಜಾರಾಮ ದಮೋನೆ (65), ರೋಷನ ಗಜಾನನ ದಮೋನೆ (21), ಶಾರದಾ ದಮೋನೆ (45) ಹಾಗೂ ಭಾರತಿ ರಾಜಾರಾಮ ದಮೋನೆ (50) ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಪ್ರಿಯಾ ಗಜಾನನ ದಮೋನೆ (28) ಮತ್ತು ಗಂಗಾ ಗಜಾನನ ದಮೋನೆ (25) ಎಂದು ತಿಳಿದುಬಂದಿದೆ. ಇಬ್ಬರಿಗೂ ಗಂಭೀರ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಗಣಪತಿ ಮಂಟಪಕ್ಕೂ ಬೆಂಕಿಯ ಬಿಸಿ ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಮನೆಯ ಪಕ್ಕದಲ್ಲೇ ಗಣಪತಿ ಮಂಟಪವನ್ನು ನಿರ್ಮಿಸಲಾಗಿತ್ತು. ಬೆಂಕಿಯ ಕೆನ್ನಾಲಿಗೆ ಮಂಟಪಕ್ಕೂ ತಗುಲಿದ್ದು, ಅಲ್ಪ ಪ್ರಮಾಣದ ಹಾನಿಯಾಗಿದೆ.
ಬೆಂಕಿ ಹೊತ್ತಿಕೊಂಡ ವೇಳೆ ಮನೆಯೊಳಗೆ ಕುಟುಂಬದ ಆರು ಮಂದಿ ಇದ್ದರು ಎನ್ನಲಾಗಿದೆ. ಫ್ರಿಡ್ಜ್ ಮುಂಭಾಗದಲ್ಲಿ ಮಲಗಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಮನೆಯಲ್ಲಿದ್ದ ಸಿಲಿಂಡರ್‌ಗಳನ್ನು ಕೂಡ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಬೆಂಕಿಯ ತೀವ್ರತೆಗೆ ಟಿಜೋರಿ, ಫ್ರಿಡ್ಜ್ ಸೇರಿದಂತೆ ಮನೆಯ ಬಹುತೇಕ ವಸ್ತುಗಳು ಸುಟ್ಟು ಭಸ್ಮವಾಗಿವೆ. ಘಟನೆಯ ಬಳಿಕ ಪಕ್ಕದ ಮನೆಯವರು ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಘಟನೆ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಗಣೇಶ ಹಬ್ಬದ ಸಂಭ್ರಮದ ದಿನವೇ ಸಂಭವಿಸಿದ ಈ ದುರಂತ ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದ್ದು, ಒಂದೇ ಕುಟುಂಬದ ನಾಲ್ವರ ಸಾವಿನಿಂದ ಚಾವ್ಹಾಣ್ ಗಲ್ಲಿಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.


