ಕಲಬುರಗಿಯಲ್ಲಿ 79ನೇ ಕಲ್ಯಾಣ ಕರ್ನಾಟಕ ಉತ್ಸವ–2026 ಸೆಪ್ಟೆಂಬರ್ 16 ಮತ್ತು 17ರಂದು ನಡೆಯಲಿದೆ. ಕಲ್ಯಾಣ ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆ ಮತ್ತು ಸ್ಥಳೀಯ ಪ್ರತಿಭೆಯನ್ನು ಪರಿಚಯಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆಪ್ಟೆಂಬರ್ 16ರಂದು ಪಬ್ಲಿಕ್ ಗಾರ್ಡನ್‌ನಲ್ಲಿ ಸಂಜೆ 6.30ರಿಂದ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಸ್ತ್ರೀಯ ನೃತ್ಯ ಹಾಗೂ ಇತರ ನೃತ್ಯ ಪ್ರದರ್ಶನಗಳು ನಡೆಯಲಿವೆ. ರಾತ್ರಿ ಸ್ಟ್ರೀಟ್ ಫೆಸ್ಟಿವಲ್ ಮತ್ತು ಸಂಗೀತ ಕಾರ್ಯಕ್ರಮಗಳು ಕೂಡ ಇರಲಿವೆ.
ಅಪ್ಪನ ಕೆರೆಯಲ್ಲಿ ಇಂಡೋ-ಫ್ಯೂಷನ್ ಸಂಗೀತ ಕಾರ್ಯಕ್ರಮದ ಜೊತೆಗೆ 3D ಲೈಟ್ ಶೋ ಮತ್ತು ಡ್ರೋನ್ ಶೋ ಆಯೋಜಿಸಲಾಗಿದೆ. ಕೆರೆಯ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯೂ ಕಾರ್ಯಕ್ರಮದ ಭಾಗವಾಗಿದೆ.
ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ನಡೆಯಲಿದೆ. ಪೊಲೀಸ್ ಪರೇಡ್ ಮೈದಾನದಲ್ಲಿ ಬೆಳಗ್ಗೆ ಧ್ವಜಾರೋಹಣ, ಸಮೂಹ ನೃತ್ಯ ಮತ್ತು ಲೈವ್ ಪೇಂಟಿಂಗ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಂಜೆ ಡಾ. ಎಸ್.ಎಂ. ಪಂಡಿತ್ ರಂಗಮಂದಿರ ಮತ್ತು ಪಬ್ಲಿಕ್ ಗಾರ್ಡನ್‌ನಲ್ಲಿ ನೃತ್ಯ, ಸಂಗೀತ, ಸ್ಟ್ಯಾಂಡ್-ಅಪ್ ಕಾಮಿಡಿ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ಅಪ್ಪನ ಕೆರೆಯಲ್ಲಿ ಸೌಂಡ್ ಮತ್ತು ಲೈಟ್ ಶೋ ಕೂಡ ನಡೆಯಲಿದೆ.
ಸಾರ್ವಜನಿಕರು, ಯುವಕರು, ವಿದ್ಯಾರ್ಥಿಗಳು ಮತ್ತು ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಥಳೀಯ ಕಲಾವಿದರು ಮತ್ತು ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.



