ಗುರ್ಲಾಪುರ, ನ. 2: ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ರೈತರು ಬೃಹತ್ ಪಾದಯಾತ್ರೆ ಮೂಲಕ ಜೈಲ್ ಭರೋ ಚಳವಳಿಗೆ ಮುಂದಾಗಿದ್ದಾರೆ.
ಕಬ್ಬಿಗೆ ತಕ್ಷಣ ನ್ಯಾಯಯುತ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಗುರ್ಲಾಪುರ ಗ್ರಾಮದಿಂದ ಬೆಳಗಾವಿಯ ಹಿಂಡಲಗಾ ಜೈಲಿನವರೆಗೆ ರೈತರ ಪಾದಯಾತ್ರೆ ಆರಂಭಗೊಂಡಿದೆ.
ಗುರ್ಲಾಪುರದಿಂದ ಕಂಕಣವಾಡಿ, ಕಬ್ಬೂರು, ಹುಕ್ಕೇರಿ ಮಾರ್ಗವಾಗಿ ಬೆಳಗಾವಿ ಹಿಂಡಲಗಾ ಜೈಲಿನವರೆಗೆ ಪಾದಯಾತ್ರೆ ಸಾಗಲಿದೆ. ಸರ್ಕಾರ ಕೂಡಲೇ ಕಬ್ಬಿಗೆ ಸೂಕ್ತ ಬೆಲೆ ಘೋಷಿಸದಿದ್ದರೆ ರೈತರು ಸ್ವಯಂಪ್ರೇರಿತವಾಗಿ ಬಂಧನಕ್ಕೆ ಒಳಗಾಗಿ ಜೈಲ್ ಭರೋ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಚಳವಳಿಯ ಸಂಘಟಕ ಚುನಪ್ಪ ಪೂಜಾರಿ, ಹಾಗೂ ಶಶಿಕಾಂತ್ ಪಡಸಲಗಿ ಅವರು “ಇದು ಸಂಪೂರ್ಣ ಶಾಂತಿಯುತ ಹೋರಾಟವಾಗಿದೆ. ನಾವು ಯಾರಿಗೂ ತೊಂದರೆ ನೀಡುವುದಿಲ್ಲ. ರೈತರ ನ್ಯಾಯಯುತ ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಲಕ್ಷಾಂತರ ರೈತರು ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಕಬ್ಬು ಬೆಳೆಗಾರರ ಹಿತ ಕಾಪಾಡಲು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ನ್ಯಾಯಯುತ ಬೆಲೆ ನಿಗದಿಪಡಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.


