HomeUncategorizedಅಕ್ರಮ ಸಂಬಂಧಕ್ಕೆ ಹೆತ್ತ ಮಗನೇ ಬಲಿ!  

ಅಕ್ರಮ ಸಂಬಂಧಕ್ಕೆ ಹೆತ್ತ ಮಗನೇ ಬಲಿ!  

ಹೈಕೋರ್ಟ್ ಮೆಟ್ಟಿಲೇರಿ ನಾಟಕವಾಡಿದ್ದ  ಕ್ರೂರಿ ತಾಯಿ ಕೊನೆಗೂ ಸಾವು!!

ಆಂಧ್ರಪ್ರದೇಶ: ಅನೈತಿಕ ಸಂಬಂಧದ ವ್ಯಾಮೋಹಕ್ಕೆ ಬಿದ್ದ ಹೆತ್ತ ತಾಯಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗನನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘೋರ ಘಟನೆಯೊಂದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದೋನಿ ಮಂಡಲದ ಜಿ. ಹೊಸಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕೊಲೆ ಮಾಡಿ ಪೊಲೀಸರ ಕಣ್ಣಿಗೆ ಮಣ್ಣೆರಚಲು ಹೈಕೋರ್ಟ್‌ವರೆಗೂ ಹೋಗಿ ನಾಟಕವಾಡಿದ್ದ ತಾಯಿ, ಕೊನೆಗೆ ತನಿಖೆ ಚುರುಕಾಗುತ್ತಿದ್ದಂತೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ!

 

ಅಸಲಿಗೆ ನಡೆದಿದ್ದೇನು?

ಜಿ. ಹೊಸಳ್ಳಿ ಗ್ರಾಮದ ಗಂಗಮ್ಮ ಎಂಬ ಮಹಿಳೆಗೆ ದರ್ಗಪ್ಪ ಎಂಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವಿತ್ತು. ತಾಯಿಯ ಈ ತಪ್ಪು ನಡವಳಿಕೆಯನ್ನು ಆಕೆಯ 15 ವರ್ಷದ ಮಗ ವೀರೇಂದ್ರ ತೀವ್ರವಾಗಿ ವಿರೋಧಿಸಿದ್ದಲ್ಲದೆ, ಪ್ರತಿದಿನ ಪ್ರಶ್ನಿಸುತ್ತಿದ್ದ.

ತನ್ನ ಅಕ್ರಮ ಸಂಬಂಧಕ್ಕೆ ಮಗನೇ ಮುಳ್ಳಾಗುತ್ತಿದ್ದಾನೆ ಎಂದು ಕುಪಿತಳಾದ ಗಂಗಮ್ಮ, ಪ್ರಿಯಕರ ದರ್ಗಪ್ಪನೊಂದಿಗೆ ಸೇರಿ ಸ್ವಂತ ಮಗನನ್ನೇ ಕತ್ತಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ.

ತದನಂತರ ಯಾರಿಗೂ ಅನುಮಾನ ಬಾರದಂತೆ ಬಾಲಕನ ಮೃತದೇಹವನ್ನು ಸ್ಥಳೀಯ ಸ್ಮಶಾನದಲ್ಲಿ ಗುಟ್ಟಾಗಿ ಹೂತು ಹಾಕಿದ್ದರು.

ಹೈಕೋರ್ಟ್ ಮೆಟ್ಟಿಲೇರಿ ನಾಟಕವಾಡಿದ್ದ ತಾಯಿ!: ಮಗನನ್ನು ಕಟುಕಳಂತೆ ಕೊಂದ ಬಳಿಕ ಆರೋಪಿ ಗಂಗಮ್ಮ ಕಿಂಚಿತ್ತೂ ಭಯವಿಲ್ಲದೆ ಸಿನಿಮಾ ಶೈಲಿಯಲ್ಲಿ ನಾಟಕವಾಡಿದ್ದಾಳೆ. ತಾನೇ ಸ್ವತಃ ಪೊಲೀಸ್ ಠಾಣೆಗೆ ತೆರಳಿ ಮಗ ನಾಪತ್ತೆಯಾಗಿದ್ದಾನೆ ಎಂದು ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾಳೆ. ಅಷ್ಟಕ್ಕೇ ನಿಲ್ಲಿಸದ ಆಕೆ, ಪೊಲೀಸರು ತನ್ನ ಮಗನ ನಾಪತ್ತೆ ಪ್ರಕರಣದ ತನಿಖೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ನೇರವಾಗಿ ಹೈಕೋರ್ಟ್ ಮೆಟ್ಟಿಲೇರಿ ಅರ್ಜಿ ಸಲ್ಲಿಸಿದ್ದಳು!

ಸಿಟ್ (SIT) ತನಿಖೆಯಲ್ಲಿ ಬಯಲಾಯ್ತು ಅಸಲಿ ಸತ್ಯ:  ಮಹಿಳೆಯ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲು ವಿಶೇಷ ತನಿಖಾ ತಂಡಕ್ಕೆ (SIT) ಆದೇಶಿಸಿತು.

ತನಿಖೆ ಕೈಗೆತ್ತಿಕೊಂಡ ಸಿಟ್ ಅಧಿಕಾರಿಗಳು ಗಂಗಮ್ಮ ಹಾಗೂ ಆಕೆಯ ಪ್ರಿಯಕರನ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಿದಾಗ ಕತ್ತಲಲ್ಲಿದ್ದ ಅಸಲಿ ಸತ್ಯ ಹೊರಬಿದ್ದಿದೆ.

ಹೆತ್ತ ತಾಯಿ ಮತ್ತು ಆಕೆಯ ಪ್ರಿಯಕರನೇ ಸೇರಿ ವೀರೇಂದ್ರನನ್ನು ಕೊಲೆ ಮಾಡಿರುವುದಕ್ಕೆ ಪೂರಕ ಪುರಾವೆಗಳು ಲಭ್ಯವಾಗಿವೆ.

ಸ್ಮಶಾನದಲ್ಲಿ ಶವ ಹೊರತೆಗೆದ ಪೊಲೀಸರು: ಸತ್ಯಾಂಶ ಬಹಿರಂಗಗೊಳ್ಳುತ್ತಿದ್ದಂತೆ, ಕಂದಾಯ ಮತ್ತು ವೈದ್ಯಕೀಯ ತಂಡಗಳ ಸಮ್ಮುಖದಲ್ಲಿ ಪೊಲೀಸರು ಸ್ಥಳೀಯ ಸ್ಮಶಾನಕ್ಕೆ ತೆರಳಿ, ಅಲ್ಲಿ ಹೂತು ಹಾಕಲಾಗಿದ್ದ ವೀರೇಂದ್ರನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಸಿಕ್ಕಿಬೀಳುವ ಭಯದಲ್ಲೇ ಆರೋಪಿ ಸಾವು!  ಪೊಲೀಸ್ ತನಿಖೆ ತೀವ್ರಗೊಂಡು ತಾನು ಸಿಕ್ಕಿಬೀಳುವುದು ನೂರಕ್ಕೆ ನೂರರಷ್ಟು ಖಚಿತವಾಗುತ್ತಿದ್ದಂತೆ ಆರೋಪಿ ಗಂಗಮ್ಮ ತೀವ್ರ ಭಯ ಹಾಗೂ ಮಾನಸಿಕ ಒತ್ತಡದಿಂದಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ.

ತಕ್ಷಣ ಆಕೆಯನ್ನು ಕರ್ನೂಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆತ್ತ ಮಗನನ್ನೇ ಬಲಿಪಡೆದು ನಾಟಕವಾಡಿದ ತಾಯಿಯ ಪಾಪದ ಕೊಡ ತುಂಬಿ ಆಸ್ಪತ್ರೆಯಲ್ಲೇ ಸಾವನ್ನಪ್ಪಿರುವುದು ಮತ್ತು ಆಕೆಯ ಪ್ರಿಯಕರ ಪೊಲೀಸರ ಅತಿಥಿಯಾಗಿರುವುದು ಸದ್ಯ ಇಡೀ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments