ಯಾದಗಿರಿ: ಅನ್ನಭಾಗ್ಯದ (Annabhagya) ಅಕ್ಕಿ (Rice) ಅಕ್ರಮ ಸಾಗಾಟ ದಂಧೆಯೊಂದು ಯಾದಗಿರಿ (Yadagiri) ಜಿಲ್ಲೆಯ ಶಹಾಪುರ (Shahapura) ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸ್ವಕ್ಷೇತ್ರದಲ್ಲಿಯೇ ಈ ಘಟನೆ ನಡೆದಿದೆ.
ಈ ಸಂಬಂಧ ಪೊಲೀಸರು ಆರೋಪಿ ರಾಜು ಪವಾರ್ ಎಂಬಾತನನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿ ದೇವರಾಜ ರಾಠೋಡ್ ಪರಾರಿಯಾಗಿದ್ದಾನೆ. ಇನ್ನು 2.62 ಲಕ್ಷ ರೂ. ಮೌಲ್ಯದ ಅಕ್ಕಿ ಜೊತೆಗೆ ಗೂಡ್ಸ್ ವಾಹನವನ್ನು ಕೂಡ ಪೊಲೀಸರು ಸೀಜ್ ಮಾಡಿದ್ದಾರೆ.
ಶಹಾಪುರ ತಾಲೂಕಿನ ಗೋಗಿ ಗ್ರಾಮದ ಹೊರವಲಯದಲ್ಲಿ ಪಡಿತರ ಕಾರ್ಡ್‌ದಾರರಿಂದ ಅಕ್ಕಿ ಖರೀದಿಸಿ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಖಚಿತ ಮಾಹಿತಿ ಪಡೆದ ಆಹಾರ ನಿರೀಕ್ಷಕ ಬಸವರಾಜ್ ಹಾಗೂ ಪಿಎಸ್‌ಐ ದೇವಿಂದ್ರರೆಡ್ಡಿ ಅವರು ದಾಳಿ ನಡೆಸಿದ್ದಾರೆ.
ತೆಲಂಗಾಣ ಪಾಸಿಂಗ್ ಹೊಂದಿರುವ ಗೂಡ್ಸ್ ವಾಹನದಲ್ಲಿ 2.62 ಲಕ್ಷ ರೂ. ಮೌಲ್ಯದ 158 ಚೀಲಗಳಲ್ಲಿ ಅನ್ನಭಾಗ್ಯ ಅಕ್ಕಿ ಪತ್ತೆಯಾಗಿದೆ.
ಪೊಲೀಸರು ಅಕ್ಕಿ ಸಹಿತ ಗೂಡ್ಸ್ ವಾಹನವನ್ನು ಜಪ್ತಿ ಮಾಡಿಕೊಂಡಿದ್ದು, ಗೋಗಿ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ.
ಇನ್ನೂ ಚಾಮನಾಳ ತಾಂಡಾದ ವ್ಯಾಪ್ತಿಯ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿರುವ ಪಡಿತರ ಅಕ್ಕಿ ಖರೀದಿ ಮಾಡಿ, ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆಯಷ್ಟೇ ಗುರುಮಠಕಲ್‌ನಲ್ಲಿಯೂ ಅನ್ನಭಾಗ್ಯದ ಅಕ್ಕಿ ಅಕ್ರಮ ಮಾರಾಟ ಜಾಲ ಪತ್ತೆಯಾಗಿತ್ತು. ಅಲ್ಲದೇ ಈ ಅಕ್ಕಿಯನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು.
ಜಿಲ್ಲೆಯ ವಿವಿಧೆಡೆಯಿಂದ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಇಲ್ಲಿಗೆ ತಂದು, ಅತ್ಯಾಧುನಿಕ ಯಂತ್ರಗಳಲ್ಲಿ ಹಾಕಿ, ಪಾಲಿಶ್ ಮಾಡಲಾಗುತ್ತಿತ್ತು. ಹಿಗೆ ಪಾಲಿಶ್ ಮಾಡಿದ ಈ ಅಕ್ಕಿಯನ್ನು 25, 10 ಕೆಜಿಯ ಬ್ಯಾಗ್‌ಗಳಲ್ಲಿ, ಡೈನಾಸ್ಟಿ, ವೋಲ್ಗಾ ಎಎಎ, ದಾರಾ ಡಬ್ಬಲ್ ಸ್ಟಾರ್ ಮುಂತಾದ ಬ್ರ್ಯಾಂಡ್‌ಗಳಲ್ಲಿ ಸಿಂಗಾಪುರ, ಫ್ರಾನ್ಸ್, ಗಲ್ಫ್ ರಾಷ್ಟ್ರಗಳಿಗೆ ಸಾಗಿಸಲು ಸಂಚು ನಡೆದಿತ್ತು ಎಂದು ತಿಳಿದು ಬಂದಿತ್ತು.
ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದರೂ ಕೂಡ ಜಿಲ್ಲೆಯಲ್ಲಿ ಅಕ್ಕಿ ಸಾಗಾಟ ದಂಧೆ ನಿಲ್ಲುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.
ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್‌ಗಳ ಹೆಸರಲ್ಲಿ ನಕಲು ಮಾಡಿ, ಅತ್ಯುತ್ತಮ ಗುಣಮಟ್ಟದ ಅಕ್ಕಿ ಎಂದು ಮೂರ್ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಸಿಂಗಾಪುರ ಹಾಗೂ ಗಲ್ಫ್ ರಾಷ್ಟ್ರಗಳಿಗೆ ಕಳುಹಿಸಲಾಗುತ್ತಿತ್ತು.
ಆಯಾ ರಾಷ್ಟ್ರಗಳ ಭಾಷೆಗಳಲ್ಲಿ ಪ್ರಿಂಟ್ ಮಾಡಿ, ಸಿಂಗಾಪುರದಲ್ಲಿ 25 ಕೆಜಿ ತೂಕದ ಚೀಲವೊಂದಕ್ಕೆ 8-10 ಸಾವಿರ ರೂ., ದುಬೈ ಸೇರಿ ಗಲ್ಫ್ ರಾಷ್ಟ್ರಗಳಲ್ಲಿ 10 ಕೆಜಿ ತೂಕದ ಚೀಲವೊಂದಕ್ಕೆ 1,500-2,000 ರು.ಗಳಿಗೆ ಮಾರಾಟಕ್ಕೆ ಸಿದ್ಧಪಡಿಸಲಾಗಿತ್ತು ಎಂದು ಮೂಲಗಳು ತಿಳಿಸಿದ್ದವು.
Recent Comments