‘ಹುಚ್ಚ’ ಎಂದವರ ಎದುರೇ ಇಡೀ ನದಿಯನ್ನೇ ಸ್ವಚ್ಛಗೊಳಿಸಿದ ಯುವ ಸಾಧಕ ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯ ಬ್ಯಾವರಾ ಪಟ್ಟಣದ 20 ವರ್ಷದ ಯುವಕ ಸುರೇಂದ್ರ ಸಿಂಗ್ ಚೌಧರಿ (ಸಾಮಾಜಿಕ ಜಾಲತಾಣಗಳಲ್ಲಿ ‘ಬಿಟ್ಟು ತಬಾಹಿ’ ಎಂದೇ ಚಿರಪರಿಚಿತ) ಸಂಪೂರ್ಣ ಕಲುಷಿತಗೊಂಡಿದ್ದ ಅಜ್ನಾರ್ ನದಿಯನ್ನು ಸ್ವತಃ ಕೈಯಾರೆ ಸ್ವಚ್ಛಗೊಳಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ಈ ಯುವಕನ ಅದ್ಭುತ ಪರಿಸರ ಕಾಳಜಿಗೆ ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಸೇರಿದಂತೆ ಲಕ್ಷಾಂತರ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಏಕಾಂಗಿ ಹೋರಾಟದ ಹಿನ್ನೆಲೆ: ಕಳೆದ ಹಲವು ವರ್ಷಗಳಿಂದ ಪ್ಲಾಸ್ಟಿಕ್ ತ್ಯಾಜ್ಯ, ಕಸದ ರಾಶಿ ಹಾಗೂ ಪಾಚಿಯಿಂದ ತುಂಬಿ ಗಟಾರದಂತಾಗಿದ್ದ ಅಜ್ನಾರ್ ನದಿಯ ಸ್ಥಿತಿ ಕಂಡು ಮರುಗಿದ ಬಿಟ್ಟು ತಬಾಹಿ, ಸ್ಥಳೀಯ ಆಡಳಿತದ ನೆರವಿಗೆ ಕಾಯದೆ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.
ಆರಂಭದಲ್ಲಿ ಕೆಲ ಸ್ನೇಹಿತರೊಂದಿಗೆ ಗಣರಾಜ್ಯೋತ್ಸವದಂದು ಸ್ವಚ್ಛತೆ ಆರಂಭಿಸಿದರೂ, ನಂತರ ಸ್ನೇಹಿತರು ಹಿಂದೆ ಸರಿದರು.
ಯಾವುದೇ ಯಂತ್ರೋಪಕರಣಗಳಿಲ್ಲದೆ, ಸ್ವಂತ ಹಣದಲ್ಲಿ ಕೈಗವಸು ಹಾಗೂ ಚೀಲಗಳನ್ನು ಖರೀದಿಸಿ, ಕೊಳಕು ನೀರಿನಲ್ಲಿ ಇಳಿದು ಏಕಾಂಗಿಯಾಗಿ ಪ್ಲಾಸ್ಟಿಕ್ ಹಾಗೂ ಪಾಚಿಯನ್ನು ಹೊರತೆಗೆದರು.
ನಿರಂತರ ಕೊಳಕು ನೀರಿನ ಸಂಪರ್ಕದಿಂದ ಕೈ-ಕಾಲುಗಳಿಗೆ ಚರ್ಮದ ಸೋಂಕು ತಗುಲಿದರೂ ಲೆಕ್ಕಿಸದೆ ತಿಂಗಳುಗಟ್ಟಲೆ ಶ್ರಮಿಸಿದರು.
ಟೀಕೆಗಳಿಗೆ ಕೆಲಸದಿಂದಲೇ ಉತ್ತರ: ಸಾಮಾಜಿಕ ಜಾಲತಾಣಗಳಲ್ಲಿ ಸ್ವಚ್ಛತಾ ಕಾರ್ಯದ ವಿಡಿಯೋಗಳನ್ನು ಹಂಚಿಕೊಂಡಾಗ ಹಲವರು “ಕೇವಲ ಲೈಕ್ಸ್ ಮತ್ತು ಫಾಲೋವರ್ಸ್ಗಾಗಿ ಡ್ರಾಮಾ ಮಾಡುತ್ತಿದ್ದಾನೆ”, “ಹುಚ್ಚ” ಎಂದು ಹೀಯಾಳಿಸಿದ್ದರು. ಆದರೆ ಈ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಬಿಟ್ಟು, ನದಿಯ ಮುಂಚಿನ ಮತ್ತು ಸ್ವಚ್ಛಗೊಳಿಸಿದ ನಂತರದ ದೃಶ್ಯಗಳನ್ನು ಹಂಚಿಕೊಂಡು ನದಿಗೆ ಮರುಜೀವ ನೀಡಿದ್ದಾರೆ.
ಆನಂದ್ ಮಹೀಂದ್ರಾ ಶ್ಲಾಘನೆ: ಬಿಟ್ಟು ತಬಾಹಿಯ ಕಾರ್ಯವನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡ ಆನಂದ್ ಮಹೀಂದ್ರಾ, ಇವರನ್ನು ತಮ್ಮ ‘ಮಂಡೇ ಮೋಟಿವೇಶನ್’ ಎಂದು ಕರೆದಿದ್ದಾರೆ.
“ಸಾಮಾಜಿಕ ಜಾಲತಾಣಗಳಲ್ಲಿ ಕ್ಷುಲ್ಲಕ ವಿಚಾರಗಳಿಗೆ ಜನಪ್ರಿಯತೆ ಸಿಗುತ್ತದೆ ಎಂಬ ದೂರು ಸಾಮಾನ್ಯ. ಆದರೆ ಲೈಕ್ಸ್ ಪಡೆಯುವ ಹಂಬಲವೂ ಒಂದು ನದಿಯನ್ನು ಸ್ವಚ್ಛಗೊಳಿಸುವಂತಹ ಸತ್ಕಾರ್ಯಕ್ಕೆ ಪ್ರೇರಣೆಯಾದರೆ ಅದು ಖಂಡಿತ ಶ್ಲಾಘನೀಯ” ಎಂದು ಬರೆದುಕೊಂಡಿದ್ದಾರೆ.
ಕೇವಲ ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ನದಿಯ ಚಿತ್ರಣವನ್ನೇ ಬದಲಾಯಿಸಬಹುದು ಎಂಬುದಕ್ಕೆ ಬಿಟ್ಟು ತಬಾಹಿ ಸಾಕ್ಷಿಯಾಗಿದ್ದು, ದೇಶಾದ್ಯಂತ ಅಪಾರ ಪ್ರಶಂಸೆಗೆ ಪಾತ್ರರಾಗಿದ್ದಾರೆ.


