ಮೈಸೂರು ದಸರಾ 2026ರ ಪ್ರಮುಖ ಆಕರ್ಷಣೆಯಾಗಿ ಭಾರತೀಯ ವಾಯುಪಡೆಯ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ ಏರ್‌ಶೋ ನಡೆಯಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ನಡೆದ ಚರ್ಚೆಯ ಬಳಿಕ ದಸರಾ ಸಂದರ್ಭದಲ್ಲಿ ಏರ್‌ಶೋ ಮತ್ತು ಸೇನಾ ಪರೇಡ್ ನಡೆಸಲು ಅನುಮತಿ ದೊರೆತಿದೆ
ಅಧಿಕೃತ ಮೈಸೂರು ದಸರಾ ಕಾರ್ಯಕ್ರಮದ ಪ್ರಕಾರ, ಸೂರ್ಯಕಿರಣ್ ತಂಡವು 9 Hawk Mk-132 ಜೆಟ್ ವಿಮಾನಗಳೊಂದಿಗೆ ವೈಮಾನಿಕ ಕಸರತ್ತು ಪ್ರದರ್ಶಿಸಲಿದೆ. ಲೂಪ್ಸ್, ಬ್ಯಾರೆಲ್ ರೋಲ್ಸ್, ಇನ್ವರ್ಟೆಡ್ ಫ್ಲೈಯಿಂಗ್ ಸೇರಿದಂತೆ ವಿವಿಧ ಸಾಹಸ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆಯಲಿವೆ.
ಮೈಸೂರು ದಸರಾ 2026 ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿದೆ. ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಂಬೂ ಸವಾರಿ, ಪಂಜಿನ ಕವಾಯತು ಸೇರಿದಂತೆ ಹಲವು ಕಾರ್ಯಕ್ರಮಗಳ ಜೊತೆಗೆ ವೈಮಾನಿಕ ಪ್ರದರ್ಶನವೂ ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದೆ.
ಸೂರ್ಯಕಿರಣ್ ತಂಡವು ಭಾರತೀಯ ವಾಯುಪಡೆಯ ಪ್ರಮುಖ ಏರೋಬ್ಯಾಟಿಕ್ ತಂಡವಾಗಿದ್ದು, ಅತ್ಯಂತ ಸಮನ್ವಯದಿಂದ ವಿಮಾನಗಳನ್ನು ಹಾರಿಸುವ ಮೂಲಕ ವೈಮಾನಿಕ ಕೌಶಲ್ಯ ಪ್ರದರ್ಶಿಸುತ್ತದೆ. ದಸರಾ ಸಂದರ್ಭದಲ್ಲಿ ಈ ಪ್ರದರ್ಶನವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ.



