HomeUncategorizedNewsರಾಮನಗರ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಬೃಹತ್ ಜಿಎಸ್‌ಟಿ ಗೋಲ್‌ಮಾಲ್: ಆರ್‌ಟಿಐನಿಂದ ಬಯಲಾದ 12 ಕೋಟಿ ರೂ. ಹಗರಣದ...

ರಾಮನಗರ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಬೃಹತ್ ಜಿಎಸ್‌ಟಿ ಗೋಲ್‌ಮಾಲ್: ಆರ್‌ಟಿಐನಿಂದ ಬಯಲಾದ 12 ಕೋಟಿ ರೂ. ಹಗರಣದ ಶಂಕೆ

ರಾಮನಗರ: ರಾಮನಗರ ವಿಶೇಷ ವಿಭಾಗದ ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಿರುವ ಗಂಭೀರ ಆರೋಪವೊಂದು ಮಾಹಿತಿ ಹಕ್ಕು ಕಾಯಿದೆಯಡಿ ಪಡೆದ ದಾಖಲೆಗಳಿಂದ ಬಯಲಿಗೆ ಬಂದಿದೆ. ಜಿಎಸ್‌ಟಿ ಪಾವತಿ ಮತ್ತು ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿಗಳ ಬೃಹತ್ ವ್ಯತ್ಯಾಸ ಕಂಡುಬಂದಿದ್ದು, ಈ ಬಗ್ಗೆ ಇಲಾಖೆ ನೀಡಿರುವ ಸ್ಪಷ್ಟನೆಯು ಅಧಿಕೃತ ದಾಖಲೆಗಳಿಗೇ ತದ್ವಿರುದ್ಧವಾಗಿದೆ.

ಲೋಕೋಪಯೋಗಿ ಇಲಾಖೆ ವಿಶೇಷ ವಿಭಾಗ, ರಾಮನಗರವು ಸಲ್ಲಿಸಿರುವ 2025-26ನೇ ಹಣಕಾಸು ವರ್ಷದ ಏಪ್ರಿಲ್ ತಿಂಗಳ ‘ಫಾರ್ಮ್ GSTR-7’ ರಿಟರ್ನ್ಸ್ ದಾಖಲೆಯಲ್ಲಿ ಈ ಬೃಹತ್ ವ್ಯತ್ಯಾಸ ಕಂಡುಬಂದಿದೆ. ತಿದ್ದುಪಡಿ (Amendments) ವಿಭಾಗದಲ್ಲಿ, ಗುತ್ತಿಗೆದಾರರಿಗೆ ಪಾವತಿಸಿದ ಪರಿಷ್ಕೃತ ಒಟ್ಟು ಮೊತ್ತವನ್ನು -12,05,35,400.00 ರೂ. (ಮೈನಸ್ 12 ಕೋಟಿ 5 ಲಕ್ಷದ 35 ಸಾವಿರದ 400 ರೂಪಾಯಿ) ಎಂದು ನಮೂದಿಸಲಾಗಿದೆ. ಇಷ್ಟು ದೊಡ್ಡ ಮೊತ್ತದ ಮೈನಸ್ ಎಂಟ್ರಿ ತೀವ್ರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಜಿಎಸ್‌ಟಿ ಪೋರ್ಟಲ್‌ನಲ್ಲಿ ಕಾಣುತ್ತಿರುವ ಈ ವ್ಯತ್ಯಾಸದ ಬಗ್ಗೆ ಆರ್‌ಟಿಐ ಮೂಲಕ ಕೇಳಲಾದ ಪ್ರಶ್ನೆಗೆ ಇಲಾಖೆ ಲಿಖಿತ ಉತ್ತರ ನೀಡಿದೆ. “ನವೆಂಬರ್ 2023 ರಲ್ಲಿ ಜಿಎಸ್‌ಟಿಆರ್-7 ರಿಟರ್ನ್ ಫೈಲ್ ಮಾಡುವ ಸಮಯದಲ್ಲಿ ಒಟ್ಟು ಮೊತ್ತದ ಬದಲು ವ್ಯವಕಲನ ಕಳೆದ ನಂತರದ ಮೊತ್ತವನ್ನು ಅಳವಡಿಸಲಾಗಿದೆ” ಎಂದು ಇಲಾಖೆ ಸ್ಪಷ್ಟಪಡಿಸಿದೆ. ​ಆದರೆ, ನವೆಂಬರ್ 2023ರ ಜಿಎಸ್‌ಟಿಆರ್-7 ದಾಖಲೆಗಳನ್ನು ಪರಿಶೀಲಿಸಿದಾಗ ಇಲಾಖೆಯ ಈ ವಾದ ಸಂಪೂರ್ಣ ಸುಳ್ಳು ಎಂಬುದು ಸಾಬೀತಾಗುತ್ತದೆ.

ನವೆಂಬರ್ 2023ರ ರಿಟರ್ನ್ಸ್‌ನಲ್ಲಿ ಗುತ್ತಿಗೆದಾರರಿಗೆ ಪಾವತಿಸಿದ ಒಟ್ಟು ಮೊತ್ತವೇ ಕೇವಲ 7,31,31,330 (7.31 ಕೋಟಿ ರೂ.) ಎಂದು ನಮೂದಾಗಿದೆ. ಕೇವಲ 7.3 ಕೋಟಿ ರೂಪಾಯಿಗಳ ವಹಿವಾಟಿನಲ್ಲಿ 12 ಕೋಟಿ ರೂಪಾಯಿಗಳ ವ್ಯತ್ಯಾಸ ಬರಲು ಹೇಗೆ ಸಾಧ್ಯ? ಒಂದು ವೇಳೆ ಇಲಾಖೆ ಹೇಳುವಂತೆ ‘ಒಟ್ಟು ಮೊತ್ತದ ಬದಲು ಕಡಿತಗೊಳಿಸಿದ ಮೊತ್ತ’ ನಮೂದಾಗಿದ್ದರೆ, ಆ ತಪ್ಪನ್ನು ಸರಿಪಡಿಸಲು ಮುಂದಿನ ರಿಟರ್ನ್ಸ್‌ನಲ್ಲಿ ಮೊತ್ತವನ್ನು ಹೆಚ್ಚಿಸಬೇಕಿತ್ತು. ಆದರೆ, ಏಪ್ರಿಲ್ 2025-26ರ ದಾಖಲೆಯಲ್ಲಿ ಬರೋಬ್ಬರಿ -12 ಕೋಟಿ ರೂ. ಕಡಿತಗೊಳಿಸಲಾಗಿದೆ. ಅಂದರೆ, ಇಲಾಖೆಯು ಈ ಹಿಂದೆ 12 ಕೋಟಿ ರೂ.ಗಳನ್ನು ವಾಸ್ತವಕ್ಕಿಂತ ಹೆಚ್ಚುವರಿಯಾಗಿ ತೋರಿಸಿತ್ತು ಎಂಬುದನ್ನು ಈ ದಾಖಲೆ ಸ್ಪಷ್ಟಪಡಿಸುತ್ತದೆ.

ಗುತ್ತಿಗೆದಾರರಿಗೆ ಶೇ. 18ರಷ್ಟು ಜಿಎಸ್‌ಟಿ ಸೇರಿಸಿ ಕೋಟ್ಯಂತರ ರೂಪಾಯಿಗಳ ಬಿಲ್ ಪಾವತಿಸುವ ಪಿಡಬ್ಲ್ಯೂಡಿ ಅಧಿಕಾರಿಗಳು, “ಯಾವುದೇ ಸಾಮಾಗ್ರಿ ಖರೀದಿ ಇನ್‌ವಾಯ್ಸ್‌ ಅನ್ನು ಈ ವಿಭಾಗ ಕಛೇರಿಯು ಪಡೆಯುವುದಿಲ್ಲ” ಎಂದು ಖುದ್ದು ಲಿಖಿತವಾಗಿ ಒಪ್ಪಿಕೊಂಡಿದ್ದಾರೆ. ಗುತ್ತಿಗೆದಾರರು ಸರ್ಕಾರಕ್ಕೆ ಜಿಎಸ್‌ಟಿ ಪಾವತಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳದೆ ತೆರಿಗೆ ಮೊತ್ತವನ್ನು ಕಣ್ಮುಚ್ಚಿ ಬಿಡುಗಡೆ ಮಾಡುತ್ತಿರುವುದು, ತೆರಿಗೆ ವಂಚಕರಿಗೆ ಇಲಾಖೆಯೇ ಹಾಸಿರುವ ಕೆಂಪುಗಂಬಳಿಯಂತಿದೆ. ಇಷ್ಟು ದೊಡ್ಡ ಮೊತ್ತದ ಲೆಕ್ಕಾಚಾರದ ಪ್ರಮಾದ ನಡೆದಿದ್ದರೂ, ಸಿಎಜಿ ಲೆಕ್ಕಪರಿಶೋಧನೆ ವರದಿಯಲ್ಲಿ ಈ ಅಸಂಗತತೆಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ (ಯಾವುದು ಇರುವುದಿಲ್ಲ) ಎಂದು ಇಲಾಖೆ ತಿಳಿಸಿದೆ. ಇದು ವ್ಯವಸ್ಥಿತ ಲೂಟಿಯ ಅನುಮಾನವನ್ನು ದಟ್ಟವಾಗಿಸಿದೆ.

ಈ ಭಾರೀ ಅವ್ಯವಹಾರದ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಣ ಪಡೆದ ಗುತ್ತಿಗೆದಾರರ ಹೆಸರು, ಅವರ ಜಿಎಸ್‌ಟಿ ನಂಬರ್ ಹಾಗೂ ಬಿಡುಗಡೆಯಾದ ಹಣದ ಪಟ್ಟಿಯನ್ನು ಆರ್‌ಟಿಐ ಅಡಿಯಲ್ಲಿ ಕೇಳಲಾಗಿತ್ತು. ಆದರೆ, “ಗುತ್ತಿಗೆದಾರರ ಜಿಎಸ್‌ಟಿ ನಂಬರ್ ವೈಯುಕ್ತಿಕ ಮಾಹಿತಿಯಾಗಿದ್ದು ಅದನ್ನು ನೀಡಲು ಬರುವುದಿಲ್ಲ” ಎಂದು ಅಧಿಕಾರಿಗಳು ಆರ್‌ಟಿಐ ಕಾಯಿದೆಯನ್ನೇ ಗಾಳಿಗೆ ತೂರಿ ಮೂರ್ಖತನದ ಹಿಂಬರಹ ನೀಡಿದ್ದಾರೆ. ಸರ್ಕಾರದ ಬೊಕ್ಕಸದಿಂದ ಬಿಡುಗಡೆಯಾದ ತೆರಿಗೆ ಹಣವು ಖಾಸಗಿ ಮಾಹಿತಿಯಾಗಲು ಹೇಗೆ ಸಾಧ್ಯ? ಇದು ಕಳ್ಳರನ್ನು ಕಾಪಾಡುವ ಮತ್ತು ಭ್ರಷ್ಟಾಚಾರವನ್ನು ಮುಚ್ಚಿಹಾಕುವ ಸ್ಪಷ್ಟ ಯತ್ನ ಎಂದು ಮಾಹಿತಿ ಹಕ್ಕು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಸಾರ್ವಜನಿಕರ ತೆರಿಗೆ ಹಣ ಯಾರಪ್ಪನ ಮನೆ ಆಸ್ತಿಯೂ ಅಲ್ಲ. ಜಿಎಸ್‌ಟಿ ನಿಯಮಗಳನ್ನು ಗಾಳಿಗೆ ತೂರಿ, ಪಾರದರ್ಶಕತೆಯನ್ನು ಮರೆಮಾಚುತ್ತಿರುವ ರಾಮನಗರ ವಿಶೇಷ ವಿಭಾಗದ ಕಚೇರಿಯ ಈ ವಹಿವಾಟುಗಳ ಬಗ್ಗೆ ಕೂಡಲೇ ಉನ್ನತ ಮಟ್ಟದ ತನಿಖೆಯಾಗಬೇಕಿದೆ. ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಲೋಕಾಯುಕ್ತರು ಕೂಡಲೇ ಎಚ್ಚೆತ್ತುಕೊಂಡು, ಭ್ರಷ್ಟರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments